ಮಹಾನಗರ ಪಾಲಿಕೆಯ ಕಾರ್ಯಗಳು

ನಿಗಮದ ನಿರ್ಬಂಧಕ ಪ್ರಕಾರ್ಯಗಳು:- ಈ ಕೆಳಕಂಡ ವಿಷಯಗಳಲ್ಲಿ ಪ್ರತಿಯೊಂದಕ್ಕಾಗಿ ತಾನು ಕಾನೂನು ಸಮ್ಮತವಾಗಿ ಉಪಯೋಗಿಸಲು ಅಥವಾ ತೆಗೆದುಕೊಳ್ಳಲು ಸಕ್ಷಮವಾದ ಯಾವುದೇ ಸಾಧನೆಗಳು ಅಥವಾ ಕ್ರಮಗಳ ಮೂಲಕ ಯುಕ್ತವಾದ ಮತ್ತು ಸಾಕಷ್ಟುಉಪಬಂಧವನ್ನು ಮಾಡುವುದು ನಿಗಮದ ಕರ್ತವ್ಯವಾಗಿರತಕ್ಕುದು ಎಂದರೆ-
(1)    ನಗರದ ಪರಿಮಿತಿಗಳನ್ನು ಅಥವಾ ಪರಿಮಿತಿಗಳಲ್ಲಿ ಯಾವುದೇ ವ್ಯತ್ಯಾಸವನ್ನು ನಿರ್ಧರಿಸುವ ಸರ್ಕಾರವು ಅನುಮೋದಿಸತಕ್ಕಂಥ ವರ್ಣನೆಯ ಮತ್ತು ಅಂಥ ಸ್ಥಾನಗಳಲ್ಲಿ ಗಮನಾರ್ಹ ಗಡಿ ಗುರುತುಗಳನ್ನು ನಿಲ್ಲಿಸುವುದು;
(2)    ನಗರದ ಎಲ್ಲಾ ಸಾರ್ವಜನಿಕ ಬೀದಿಗಳಿಗೆ ಮತ್ತು ಸಾರ್ವಜನಿಕ ಸ್ಥಳಗಳಿಗೆ ನೀರು ಹಾಕುವುದು ಮತ್ತು ಅವುಗಳನ್ನು ಸ್ವಚ್ಛ ಮಾಡುವುದು ಮತ್ತು ಅಲ್ಲಿಂದ ಎಲ್ಲಾ ಕಸವನ್ನು ತೆಗೆದುಹಾಕುವುದು;
(3)    ಗ್ರಾಮಸಾರ, ಹೊಲಸು ಪದಾರ್ಥ ಮತ್ತು ಹೊಲಸನ್ನು ಸಂಗ್ರಹಿಸುವುದು, ತೆಗೆದುಹಾಕುವುದು ಮತ್ತು ಅವುಗಳನ್ನು ಸಂಸ್ಕರಿಸುವುದು ಮತ್ತು ವಿಲೇ ಮಾಡುವುದು  ಮತ್ತು ಅಂಥ ಗ್ರಾಮಸಾರ, ಹೊಲಸು ಪದಾರ್ಥ ಮತ್ತು ಕಸಗಳಿಂದ ಕಾಂಪೋಸ್ಟು ಗೊಬ್ಬರವನ್ನು ತಯಾರಿಸುವುದು;
(4)  ಚರಂಡಿಗಳು ಮತ್ತು ಒಳಚರಂಡಿ ಕಾಮಗಾರಿಗಳು,ಶೌಚಗೃಹಗಳು, ಮೂತ್ರಿಗಳು ಮತ್ತು ಅಂಥವೇ ಸೌಲಭ್ಯಗಳ ನಿರ್ಮಾಣ, ಮತ್ತು  ಸ್ವಚ್ಛಗೊಳಿಸುವುದು;
(5)   ನಿಗಮದಲ್ಲಿ ನಿಹಿತವಾದ ಸಾರ್ವಜನಿಕ ಬೀದಿಗಳು, ಪೌರಸಭಾ ಮಾರುಕಟ್ಟೆಗಳು ಮತ್ತು ಜನರು ಸೇರುವ ಸ್ಥಳಗಳಿಗೆ ದೀಪ ಒದಗಿಸುವುದು;
(6)    ನಿಗಮದ ಕಛೇರಿ ಮತ್ತು ನಿಗಮದಲ್ಲಿ ನಿಹಿತವಾಗಿರುವ ಎಲ್ಲಾ ಸಾರ್ವಜನಿಕ ಸ್ಮಾರಕಗಳು ಮತ್ತು ಬಯಲು ಜಾಗಗಳು ಮತ್ತು ಇತರೆ ಸ್ವತ್ತನ್ನು   ನಿರ್ವಹಿಸುವುದು  ಮತ್ತು ನಿಗಮದ ಎಲ್ಲಾ ಸ್ವತ್ತುಗಳ ಸತ್ಯವಾದ ಮತ್ತು ಸರಿಯಾದ ಲೆಕ್ಕವನ್ನು ಇಡುವುದು;
(7)  ನಿಗಮದಲ್ಲಿ ನಿಹಿತವಾಗಿರುವ ಬೀದಿಗಳ ಮತ್ತು ಸಾರ್ವಜನಿಕ ಸ್ಥಳಗಳಿಗೆ ಹೆಸರಿಡುವುದು ಅಥವಾ ಸಂಖ್ಯೆಯನ್ನು ಗೊತ್ತುಮಾಡುವುದು ಮತ್ತು ಆವರಣಗಳಿಗೆ     ಸಂಖ್ಯೆಯನ್ನು ಗೊತ್ತುಮಾಡುವುದು; 
(8)    ಅಸಹ್ಯಕಾರಿ ಮತ್ತು ಅಪಾಯಕಾರಿ ವ್ಯಾಪಾರಗಳ ಮತ್ತು ಆಚರಣೆಗಳ ನಿಯಂತ್ರಣ ಮತ್ತು ಕೊನೆಗೊಳಿಸುವಿಕೆ;
(9)    ಮೃತರ ಅಂತ್ಯ ಕ್ರಿಯೆಗಾಗಿನ ಸ್ಥಳಗಳ ನಿರ್ವಹಣೆ, ಬದಲಾವಣೆ ಮತ್ತು ನಿಯಂತ್ರಣ ಹಾಗೂ ಸದರಿ ಉದ್ದೇಶಕ್ಕಾಗಿ ಹೊಸ ಸ್ಥಳಗಳ ಏರ್ಪಾಡು ಮತ್ತು ಕ್ಲೇಮು   ಮಾಡದಿರುವ ಶವಗಳನ್ನು ವಿಲೇ ಮಾಡುವುದು;
(10)   ಸಾರ್ವಜನಿಕ ಮಾರುಕಟ್ಟೆಗಳು ಮತ್ತು ಕಸಾಯಿಖಾನೆಗಳ ನಿರ್ಮಾಣ   ಅಥವಾ ಆರ್ಜನೆ ಹಾಗೂ ನಿರ್ವಹಣೆ ಮತ್ತು ಎಲ್ಲಾ ಮಾರುಕಟ್ಟೆಗಳು ಮತ್ತು              ಕಸಾಯಿಖಾನೆಗಳ ನಿಯಂತ್ರಣ;
(11)   ರೋಗಿವಾಹಕ ಸೇವೆ ಮತ್ತು ಸುಡುಗಾಡುಗಳಿಗೆ ಶವಗಳನ್ನು ಸಾಗಿಸುವುದಕ್ಕಾಗಿನ ಸೇವೆಯನ್ನು ನಿರ್ವಹಿಸುವುದು;
(12)   ಉಪದ್ರವಕಾರಿ ಪಕ್ಷಗಳು ಅಥವಾ ಪ್ರಾಣಿಗಳ ಅಥವಾ ಕ್ರಮಿಕೀಟಗಳ ನಾಶ ಮತ್ತು ಬೀದಿ ಅಥವಾ ಒಡೆಯನನ್ನು ಹೊಂದಿರದ ನಾಯಿಗಳ ಬಂಧನ ಅಥವಾ     ನಾಶ;
(13)   ಹೊಸ ಸಾರ್ವಜನಿಕ ಬೀದಿಗಳ ರಚನೆ;
(14)   ಪ್ರಾಥಮಿಕ ಪೂರ್ವ ಶಿಕ್ಷಣಕ್ಕಾಗಿ ಶಾಲೆಗಳನ್ನು ನಿರ್ವಹಿಸುವುದು ಅಥವಾ ಅವುಗಳಿಗೆ ನೆರವು ನೀಡುವುದು;
(15)   ದನಗಳ ದೊಡ್ಡಿಗಳನ್ನು ನಿರ್ಮಿಸುವುದು ಅಥವಾ ಆರ್ಜಿಸುವುದು ಮತ್ತು ನಿರ್ವಹಿಸುವುದು;
(16)   ಸಾರ್ವಜನಿಕ ದೇವಿ ಹಾಕುವ ವ್ಯವಸ್ಥೆಯನ್ನು ಸ್ಥಾಪಿಸುವುದು ಮತ್ತು ನಿರ್ವಹಿಸುವುದು;
(17)   ಅನಾರೋಗ್ಯಕರ ಸ್ಥಳಗಳನ್ನು ಉಪಯೋಗಕ್ಕೆ ತರುವುದು, ಹಾನಿಕರ ಸಸ್ಯಗಳನ್ನು ತೆಗೆದು ಹಾಕವುದು ಮತ್ತು ಸಾಮಾನ್ಯವಾಗಿ ಎಲ್ಲಾ ಉಪದ್ರವಗಳನ್ನು  ಕೊನೆಗೊಳಿಸುವುದು;
(18)   ರಸ್ತೆ ಬೀದಿಗಳಲ್ಲಿ ಮತ್ತು ಇತರ ಕಡೆಗಳಲ್ಲಿ ಮರಗಳನ್ನು ನೆಡವುದು ಮತ್ತು ಅವುಗಳ ನಿರ್ವಹಣೆ;
(19)   ಸಾರ್ವಜನಿಕ ಬೀದಿಗಳು, ಸೇತುವೆಗಳು, ಒಳದಾರಿಗಳು, ಅಡಗಾಲುವೆಗಳು, ಒಡ್ಡುದಾರಿಗಳು ಮತ್ತು ಅಂತಹವುಗಳನ್ನೂ ನಿರ್ಮಿಸುವುದು,ಬದಲಾಯಿಸುವುದು ಮತ್ತು ಮೇಲ್ಪಾಟು ಮಾಡುವುದು;
(20)   ಬೀದಿಗಳು, ಸೇತುವೆಗಳು ಮತ್ತು ಇತರೆ ಸಾರ್ವಜನಿಕ ಸ್ಥಳಗಳಲ್ಲಿನ ಅಡೆತಡೆಗಳನ್ನು ಮತ್ತು ಮುನ್ ಚಾಚುವಿಕೆಗಳನ್ನು ತೆಗೆದುಹಾಕುವುದು;
(21)   ಎಲ್ಲಾ ಪೌರಸಭಾ ನೀರು ಸರಬರಾಜು ಗೃಹಗಳ ವ್ಯವಸ್ಥಾಪನೆ ಮತ್ತು ನಿರ್ವಹಣೆ ಮತ್ತು ಸಾರ್ವಜನಿಕ ಮತ್ತು ಖಾಸಗಿ ಉದ್ದೇಶಗಳಿಗಾಗಿ ಸಾಕಷ್ಟು ಸರಬರಾಜುಗಾಗಿ ಪೂರೈಸಲು ಅವಶ್ಯವಾದ ಹೊಸ ಕಾಮಗಾರಿಗಳನ್ನು ನಿರ್ಮಿಸುವುದು ಮತ್ತು ಅರ್ಜಿಸುವುದು;
(22)   ಅಪಾಯಕಾರಿ ರೋಗಗಳನ್ನು ನಿವಾರಿಸುವುದು ಮತ್ತು ತಡೆಗಟ್ಟುವುದು;
(23)   ಅಪಾಯಕಾರಿ ಕಟ್ಟಡಗಳು ಮತ್ತು ಸ್ಥಳಗಳನ್ನು ಭದ್ರಪಡಿಸುವುದು ಅಥವಾ ತೆಗದುಹಾಕುವುದು;
(24)   ಪೌರ ಕಾರ್ಮಿಕರಿಗಾಗಿ ವಾಸಗೃಹಗಳನ್ನು ನಿರ್ಮಿಸುವುದು ಮತ್ತು ನಿರ್ವಹಿಸುವುದು;
(25)   ಸಾರ್ವಜನಿಕ ಉದ್ಯಾನವನಗಳು, ತೋಟಗಳು, ಆಟದ ಮೈದಾನಗಳು ಮತ್ತು ಮನರಂಜನಾ ಮೈದಾನಗಳಿಗೆ ವ್ಯವಸ್ಥೆ ಮಾಡುವುದು;
(26)   ನಗರದಲ್ಲಿನ ವಸತಿಗೃಹಗಳು, ಶಿಬಿರ ಮೈದಾನಗಳು ಮತ್ತು ವಿಶ್ರಾಂತಿ ಗೃಹಗಳನ್ನು ನಿಯಂತ್ರಿಸುವುದು;
(27)   ಗ್ರಾಮಸಾರವನ್ನು ವಿಲೇ ಮಾಡುವುದಕ್ಕಾಗಿ ಕಾಂಪೋಸ್ಟ್ ಸ್ಥಾವರಗಳನ್ನು ಸ್ಥಾಪಸುವುದು ಮತ್ತು ನಿರ್ವಹಿಸುವುದು;
(28)   ನಿಗಮದಿಂದ ಅನುಮೋದನೆ ಪಡೆದ ಸಾಮಾನ್ಯ ವ್ಯವಸ್ಥೆಗೆ ಅನುಸಾರವಾಗಿ, ನಿಗಮದ ನಿಯಂತ್ರಣದಲ್ಲಿರುವ ಚರಂಡಿಗಳೊಳಕ್ಕೆ, ಆವರಣಗಳಿಗೆ ಗ್ರಾಮಸಾರವನ್ನು ಸ್ವೀಕರಿಸಲು ಮತ್ತು ಅದನ್ನು ಒಯ್ಯಲು ಆಶ್ರಮಗಳು, ಜೋಡಣೆಗಳು, ಕೊಳವೆಗಳು ಮತ್ತು ಇತರ ಸಾಧನ ಸಾಮಗ್ರಿಗಳನ್ನು ಸರಬರಾಜು            ಮಾಡುವುದು, ನಿರ್ಮಿಸುವುದು ಮತ್ತು ನಿರ್ವಹಿಸುವುದು; 
(28ಎ) ಜನರ ಮತ್ತು ಮರಣಗಳು ನೋಂದಣಿಯೂ ಸೇರಿದಂತೆ ಅತ್ಯವಶ್ಯಕ ಅಂಕಿಅಂಶಗಳು;
(28ಬಿ) ಚರ್ಮ ಹದ ಮಾಡುವ ಕಾರ್ಖಾನೆಗಳ ವಿನಿಯಮನ;]
(29)   ಸಾರ್ವಜನಿಕರಿಗೆ ಬಾಧೆಯನ್ನುಂಟು ಮಾಡುವ ಯಾವುದೇ ವಿಪತ್ತನ್ನೂ ಎದುರಿಸಲು ಕ್ರಮಗಳನ್ನು ಕೈಗೊಳ್ಳುವುದು;
(30)  ಈ ಅಧಿನಿಯಮದ ಮೂಲಕ ಅಥವಾ ಮೇರೆಗೆ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನ ಮೂಲಕ ವಿಧಿಸಲಾದ ಯಾವುದೇ      ಹೊಣೆಯನ್ನು ಈಡೇರಿಸುವುದು ಮತ್ತು ಸರ್ಕಾರವು ಅಧಿಸೂಚನೆಯ ಮೂಲಕ ನಿಗಮಕ್ಕೆ ವಹಿಸಿದ ಯಾವುದೇ ವಿಷಯಕ್ಕೆಸಂಬಂಧಿಸಿದಂತೆ ಪ್ರಕಾರ್ಯಗಳನ್ನು        ನಿರ್ವಹಿಸುವುದು;
(31) ಮೇಲೆ ನಿರ್ಧಿಷ್ಟಪಡಿಸಿದ ವಿಷಯಗಳಿಗೆ ಸಾಕಷ್ಟು ವ್ಯವಸ್ಥೆ ಮಾಡುವುದಕ್ಕೆ ಒಳಪಟ್ಟು ಕ್ಷಾಮ ಮತ್ತು ಅಭಾವ ಪರಿಸ್ಥಿತಿಗಳಲ್ಲಿ ನಗರದಲ್ಲಿನ ನಿರಾಶ್ರಿತ ವ್ಯಕ್ತಿಗಳಿಗೆ    ಪರಿಹಾರದ ವ್ಯವಸ್ಥೆ ಮಾಡುವುದು ಮತ್ತು ಅಂಥ ಕಾಲಗಳಲ್ಲಿ ಪರಿಹಾರ ಕಾಮಗಾರಿಗಳನ್ನು ಸ್ಥಾಪಸಿವುದು ಮತ್ತು ನಿರ್ವಹಿಸುವುದು.

 

 

 

ಮೂಲ : ದಾವಣಗೆರೆ ಮಹಾನಗರ ಪಾಲಿಕೆ, ಕರ್ನಾಟಕ ಸರ್ಕಾರ.